Tuesday, March 31, 2009

ಅಂದೊಂದು ದಿನಅಂದೊಂದು ದಿನ ಪರಿಚಿತ ಲೋಕದ ಕೊಂಡಿಯೊಂದು

ಆಕಸ್ಮಿಕದಿ ಸೇರಿತ್ತು ,ಈ ತೀರದಲ್ಲಿನ ನಿನ್ನ ಮುಖ ನನಗೆ

ನನ್ನ ಮುಖ ನಿನಗೆ ಮಸುಕು ಮಸುಕಾಗಿ ಕಂಡು

ಆಶ್ಚರ್ಯದ ಮುಗ್ಧನಗೆ ಹೊರಬಿದ್ದಿತ್ತು .

ಕಣ್ಣಂಚಿನಲ್ಲಿ ಸುಳಿ ಮಿಂಚೊಂದು ಫಳ ಫಳಿಸಿ ಭರವಸೆಯೊಂದು

ಚಿಗುರೊಡೆದಿತ್ತು ,ಮೌನರಾಗದ ಆಹ್ಲಾದತೆ ಎದೆ ತುಂಬಿತ್ತು

ಕನಸಿನ ಲೋಕದ ಕಡೆಗೆ ಹೆಜ್ಜೆ ಸಾಗಿತ್ತು ತಂಗಾಳಿಯ

ಮೋಹದಲೆಯ ಸ್ವರವು ಲಯಬದ್ಧವಾಗಿ ಹೊರಹೊಮ್ಮಿತ್ತು

ತೀರಗಲಾಚೆಯೊಂದು ಪಿಸುಮಾತಿತ್ತು ,ಸಂಭ್ರಮದ

ಇದಿರು ನೋಟವಿತ್ತು ,ಮಲ್ಲಿಗೆಯ ಪರಿಮಳ ದೂರದೂರಿನಿಂದ

ತೇಲಿ ಬಂದಿತ್ತು ,ಹೃದಯದಲ್ಲಿ ಕಿತ್ತ ಭಾವಪೂರ್ಣ

ಪದಗಳ ನಾಲಿಗೆಯ ಮೇಲೆ ಆಡಿಸುವಾಸೆಯಾಗುತ್ತಿತ್ತು .

ಆ ತೀರಕೆ ನಾನೇ ಬಂದು ಸೇರಲು ಹೆಜ್ಜೆ ಸನ್ನದ್ಧವಾಗಿತ್ತು

ಮನವು ದೋಣಿಗಾಗಿ ಹಾತೊರೆಯುತ್ತಿತ್ತು ,ಮರುಘಳಿಗೆಯೇ

ನೀ ದಾರಿ ಬದಲಿಸಿದೆ ನೀ ಏಕೆ ಹೊರತೆಯಂದೂ ತಿಳಿಯಲಿಲ್ಲ

ಅದ ಕೇಳುವ ತಾಕತ್ತು ನನಗಿರಲಿಲ್ಲ

ಕೂಗಲು ಬಾಯೇ ಬರಲಿಲ್ಲ ,ಸ್ವಾಭಿಮಾನ

ನಾಲಿಗೆಯ ಕಟ್ಟಿ ಹಾಕಿತ್ತು ,ಹಿಂತಿರುಗಿ ನೋಡಿ ನಸು ನಗೆ

ಬೀರುವ ಸೌಜನ್ಯವೂ ನಿನಗಿರಲಿಲ್ಲ ಒಮ್ಮೆಗೇ ಏಕಾಂತ ಕವಿಯಿತು

ಕುರುಡು ಕನಸಿನ ಲೋಕದಿ ಹೆಜ್ಜೆ ಗುರುತಾಗಿ ಉಳಿಯಿತು .

ನನ್ನದೇ ತಪ್ಪಿರಬೇಕು ಸುಮ್ಮನೆ ನಿನ್ನ ನಿರ್ಭಾವುಕ

ಕಂಗಳಲಿ ನನ್ನ ಮೊಗವ ಹುಡುಕಲು ಪ್ರಯತ್ನಿಸಿದ್ದೆ

ಹಿಂದೆಲ್ಲ ನನ್ನ ಕಂಗಳಲ್ಲಿ ಅವರ ಮೊಗ ಕಾಣಲು

ಯತ್ನಿಸಿದ್ದಾಗ ನಾನು ನಿರ್ಭಾವುಕದಿ ನಿಂತಿದ್ದೆ .

Monday, March 30, 2009


ಪ್ರೀತಿಯೇ ನೀ ಗುಪ್ತಗಾಮಿನಿ

ಹೃದಯಗಳ ನಡುವೆ ಹರಿಯುವ ಮೋದಿನಿ

ಮೃದು ನಳಿನಿ ಅಂತರಂಗದ ಸುಹಾಸಿನಿ

ಕರುಣೆಯೇ ನೀ ಪ್ರೀತಿ ಸ್ನೇಹಗಳ ಹುಟ್ಟಿನ ಕಾಮಿನಿ

ದಯೆ ಮರುಕಗಳ ಮಾಲಿನಿ ,ಶಾಲಿನಿ ,ಮೋಹಿನಿ

ಶಾಂತಿ ಮನಮೋಹಿನಿ

ಸ್ನೇಹವೇ ನೀ ಜೀವ ಸಂವೇದನೆಯ

ಅಮೃತವಾಹಿನಿ ತ್ಯಾಗ ಪ್ರೀತಿಯ ಪರಿಪಾಲಿನಿ

ಅನುರಾಗ ಆನಂದ ಸಂವರ್ಧಿನಿ

ಶಾಂತಿಯೇ ನೀ ಸ್ವಾರ್ಥ ಅಹಂಕಾರಗಳ ಸಂಹಾರಿಣಿ

ಸಜ್ಜನಿ ಹೃದಯ ಪೋಷಿನಿ ವಿಲಾಸಿನಿ

ನೀ ವಿಶ್ವ ಕುಟುಮ್ಬಿನಿ.

ಅಂತರಂಗದ ಗಾನಅಂತರಂಗದ ಒಳಗೆ

ನಿನ್ನ ಮೋಹನ ಗಾನ

ಪ್ರೀತಿ ಸಿಂಚನ ರೋಮಾಂಚನ

ಭಾವ ನವ ನವೀನ

ಎನ್ನ ಹ್ರುದಯಾಲಯದಿ ಸ್ಫೂರ್ತಿ

ಮಂಟಪ ಪ್ರೀತಿ ದೀಪ ಅನುರಾಗ

ಅರಿಶಿನ ಕುಂಕುಮ

ಅದುವೇ ನಮ್ಮ ಪ್ರೇಮ ಸಂಗಮ

ಪ್ರೀತಿ ನುಡಿಗಳೇ ಮಂತ್ರಾರ್ಚನೆ

ಅದುವೇ ಪ್ರಣಯ ಸಾಧನೆ

ಪಿಸು ಮಾತೆ ಮಂಗಳ ವಾದ್ಯ

ಸ್ನೇಹ ಅನುಭವ ವೇದ್ಯ

ಹೃದಯ ಮಂದಿರದಿ ಕಲೆ ಹಾಕುವ

ಹೂಗಳ ಪೋಣಿಸುವ

ಜೋಡಿಸುವ ಪುಷ್ಪ ಮಾಲೆ

ಅದೇ ನಮ್ಮ ನಡುವಿನ ಸಂಬಂಧ ಮಾಲೆ

Saturday, March 28, 2009

ಕನಸಿನಲ್ಲಿ ಭೇಟಿ !


ನಾಲಿಗೇಕೀ ಅಂಜಿಕೆ ಆತ ಕಣ್ಣೆದುರು ಬಂದು
ನಿಂತಾಗ ರೆಕ್ಕೆ ಸೋತ ಹಕ್ಕಿಯಂತೆ
ಬೆಪ್ಪಾಗಿ ಬೀಳುವುದು ಆತ ಕಣ್ಣೆದುರು ನಿಂತು
ನಸುನಗೆ ಬೀರಿದಾಗ

ನೇರವಾಗಿ ನಿಂತು ಮಾತನಾಡಲಾಗುವುದಿಲ್ಲ
ಅಪ್ಪಳಿಸುವ ಭಾವಗಳು ಕಣ್ಣ ಕತ್ತಲಾಗಿಸುವುದಲ್ಲ !
ಏಕೆಂದರೆ ಎಚ್ಚರದಲಿ ಮಣ್ಣ ಭಾರದ ಸುಪ್ತ
ಆಸೆಗಳ ತೆರೆದಿದುವಷ್ಟು ಎದೆಗಾರಿಕೆಯಿಲ್ಲ !

ಕನಸುಗಳೆಷ್ಟು ಮಧುರ !ನೂರಾರು ಸಿಹಿ ಆದೆಗಳ ಮೊಳೆಸಿ
ಬೆಳೆಸಿ ,ಹೊತ್ತು ನಿಂತ ತುಂಬು ಗರ್ಭಿಣಿ ಯಂತೆ
ಪ್ರಸವ ವೆದನೆಯಲೂ ಏನೋ ಖುಷಿ ,ಹೊಂನಕಿರಣದ
ಪ್ರಕಾಶ ಅಲ್ಲಿ ಅವನೊಡನೆ ಮಾತನಾಡಲು ಭಯವೇ ಆಗುವುದಿಲ್ಲ !

ಕನಸು ವಾಸ್ತವ ಗಳೆರಡಕ್ಕೂ ಒಂದೇ ಬಿಗಿಯಾದ
ನಂಟು ಹಗಲಿನಲಿ ಟೈಪಿಸಿ ಇರುಳಿನ ಹೊತ್ತಲಿ ತೆಗೆದ
ಪ್ರಿಂಟ್ ಔಟ್ ಗಳ ಕಾಪಿಯಂತೆ ಕಾಡಿ ಪೀಡಿಸುವಾಗಲೂ
ಅದರ ಮೇಲೆ ಕೋಪ ತಾಪಗಳೇ ಇಲ್ಲ ಎಂತದೋ ಸಂತಸ .

ನಕ್ಕು ಬಿಡು ಮನವೇ


ನಕ್ಕು ಬಿಡು ಮನವೇ
ಹೃದಯ ವೇದನೆಯ ತಣಿಸಿ
ಕಲ್ಪನಾ ವಿಲಾಸದ ರಂಗವಲ್ಲಿಯ ಚಿತ್ರಿಸಿ,
ಆತ್ಮಬಲದ ಸಖ್ಯವ ಬೆಳೆಸಿ
ನಕ್ಕು ಬಿಡು ಮನವೇ

ಮೌನವಾಗದಿರು ,ಎನ್ನ ಕಾಡಿಸದಿರು
ಕೊಂಕಿಸದಿರು,ಅಪಹಾಸ್ಯ ಮಾಡದಿರು
ಕ್ಷೀರ ಸಾಗರದಿ ಶಶಿ ಉದಿಸಿ ಬಂದಂತೆ
ತುಂಬು ಬೆಳದಿಂಗಳಿನ ಅಮೃತ
ಸಿಂಚನ ಮಾಡಿ ನಕ್ಕುಬಿಡು

ಭಯದ ಸಂಕೋಲೆಗಳಿಂದ ಮುಕ್ತನಾಗಿಸಿ
ಆಂತರ್ಯದಲಿ ಹೂವಾಗಿ ಪ್ರಪ್ಹುಲ್ಲಿಸಿ
ಆನಂದ ಸೌರಭವ ಪಸರಿಸಿ
ದುಂಬಿಯ ಜ್ಜೇಂಕಾರದ ನಾದಕೆ ಸ್ಪಂದಿಸಿ
ನಕ್ಕುಬಿಡು ಮನವೇ

ಬಿಂಕ ಬಿನ್ನಣಗಳ ತೋರಿಸದಿರು
ಎನ್ನ ಕಡೆಗಣಿಸದಿರು
ಭಯ ಶೋಕಗಳ ಅಳಿಸಿ ,ಮನಸ್ಥೈರ್ಯವ
ಉಜ್ವಲಿಸಿ ,ಸಚ್ಚಿದಾನಂದ ರೂಪದಲಿ
ಪ್ರಕಾಶಿಸಿ ನಕ್ಕು ಬಿಡು ಮನವೇ

ಕವಿ ಚೇತನ


ಸಾಮಾನ್ಯದವನಲ್ಲ ಈ ಕವಿ

ಉದಾತ್ತ ,ಉನ್ಮತ್ತ ರಸಿಕ ಭಾವ ರಂಜನಿಯ

ಘೋಷ್ಟಿಯ ಗರ್ಭದೊಳು ರಾಗಾನುರಾಗವ

ಪಲ್ಲವಿಸಿ ಪ್ರಸವಿಸುವ ಚೇತನ


ದೇವಿ ವಾಣಿಯ ಬಳಿ ಸಾಹಿತ್ಯ ಪಾಠವ ಕಲಿತು

ಭಾಷ್ಯ ಪ್ರೀತಿಸಿ,ಭಾವವ ಆಲಂಗಿಸಿ

ಮಾಧುರ್ಯವ ಪ್ರವೇಶಿಸಿ ,ಪದಗಳೊಂದಿಗೆ

ಸರಸ ಸಲ್ಲಾಪ ಮಾಡುವ ಈ ಕವಿ ಸಾಮಾನ್ಯದವನಲ್ಲ


ಅರ್ಹತಾ ಸೌರಭವ ಆಘ್ರಾಣಿಸಿ ,ಸ್ವಾರಸ್ಯಬಲವ

ಅಧಿಕರಿಸಿ ,ವರ್ಣನಾ ಸಾಮರ್ಥ್ಯವ ಅಭಿವ್ಯಕ್ತಿಸಿ ,ಸುಧಾಂಶುವಿನ

ಸ್ಪೂರ್ತಿಯಲಿ ಪ್ರಪ್ಹುಲ್ಲಿಸಿ ,ಜ್ಞಾನಾಭಿಸಾರಿಕೆಯಪ್ರಾಣನಾಥನಾಗುವ

ಈ ಕವಿ ಸಾಮಾನ್ಯದವನಲ್ಲ


ಚಲುವಾದ ಕವನವ ಹುಟ್ಟಿಸಿ ,ಸಂಸ್ಕಾರದ ಪೀಯುಷವ

ರುಚಿಸಿ ,ಅಸಾಮಾನ್ಯ ವಿದ್ವದ್ಜನರ ಮುಂದಿಟ್ಟು

ಯೋಗ್ಯತಾ ಪರೀಕ್ಷೆಯ ಪೈಪೋಟಿ ಗಿಳಿದು

ಮುಕ್ತ ಕಂಠದ ಸ್ತುತಿಗೊಳಪಡುವ ಈ ಕವಿ ಸಾಮಾನ್ಯದವನಲ್ಲ .

ಮಮತೆಯ ಮಡಿಲು


ನೂರಾರು ಕನಸುಗಳ ಒಂದುಗೂಡಿಸಿದ

ಬಟ್ಟಲೊಳು ಪ್ರೀತಿಯ ಕಲೆಸಿ

ಉತ್ಸಾಹದಿ ಕಂದನ ಬಾಯ್ಗಿತ್ತು

ತನ್ನ ಹಸಿವ ಮರೆವ ಜನ್ಮದಾತೆಯಿವಳುಹೊಕ್ಕಳ ಬಳ್ಳಿಯಲಿ ಅಡಗಿದ್ದ ಜೀವಕ್ಕೆ

ರಕ್ತ ಮಾಂಸದ ಪಾಲು ನೀಡಿ ಸಡಗರದಿ

ಹೆತ್ತು ರಾಜೋಪಚಾರದಿ ಕಂದನ ಬಾಳ

ಬಂಗಾರವಾಗಿಸುವ ಪ್ರಾಣದಾತೆಯಿವಳುಪ್ರೀತಿ ವಾತ್ಸಲ್ಯಡಿ ಉಕ್ಕುವ ಅಮೃತವ ಎದೆಯಿಂದ

ಹರಿಸಿ, ಮಮತೆಯ ಮಡಿಲೋಳು ಪ್ರೀತಿಯ ಭೋರ್ಗರೆಸಿ

ತಾನು ಹಡೆದ ಹಸುಗೂಸೆ ತನ್ನ ವಿಶ್ವವೆಂದು

ಭಾವ ತಂಮ್ಯದ ನಿಸ್ವಾರ್ಥದಿ ಸಂಭ್ರಮಿಸುವ

ಜೀವ ಚೈತನ್ಯದ ಪೂರ್ಣ ಬಿಮ್ಬವಿವಳುಮೈತುಂಬಿ ಬೆಳೆದ ಮಗುವ ಕಣ್ ತುಂಬಿಸಿ ,ಮೊಂಡಾಟ,

ರಂಪ ಆಟಗಳ ಸೈರಿಸಿ, ಮನ್ನಿಸಿ ,ಕೆಲವೊಮ್ಮೆ ಶಿಸ್ತಿನಲಿ

ಮಗದೊಮ್ಮೆ ಪ್ರೀತಯಾಯಲಿ ದಂಡಿಸಿ ,ಉದಾರ ಹೃದಯದಿ

ಮಾಗಿಸಿ ,ಬಾಗಿಸಿ ,ಸವಿಯಾದ ಹಾಲ್ಗೆನ್ನೆಗೆ ಚುಂಬಿಸಿ ಅಪ್ಪುಗೆಯಲಿ

ಕಂದಮ್ಮನ ನೋವ ಮರೆಸಿ ವಾತ್ಸಲ್ಯದಿ ರಾಜಿಯಾಗಿ

ನವ ಜೀವನಪಥವ ತೋರುವ ಪ್ರೇಮಮಯಿ ಇವಳು


Friday, March 27, 2009

ಎಚ್ಚರ ಬತ್ತುತಲಿದೆ ಭೂತಾಯಿಯ ಒಡಲು!

ಒಂದೆಡೆ ವಾರಕ್ಕೊಮ್ಮೆ ಕೊಳಾಯಿಗಳಿಂದ ತೊಟ್ಟಿಕ್ಕುವ ಕುಡಿಯುವ ನೀರು ,ಮತ್ತೊಂದೆಡೆ ,ಹನಿ ಹನಿ ನೀರಿಗೂ ಪರದಾಡುತ್ತಾ,ಹಪಹಪಿಸುತ್ತಾ,ಖಾಲಿಕೊದಗಳ ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡುವ ಹೆಣ್ಮಕ್ಕಳು ,ತಾನು ಹಾಕಿದ ಬೀಜ ಮೊಳೆಯದೆ,ಭೂ ತಾಯಿಯ ಬಾಯಿ ಒಣಗಿ ಬಿರುಕು ಬಿಟ್ಟ ನೆಲವನ್ನು ನೋಡುತ್ತಾ ಚಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತ ತಲೆಯ ಮೇಲೆ ಕೈ ಹೊತ್ತು ಕುಳಿತ ನೇಗಿಲಯೋಗಿ ,ಬರ ರಾಕ್ಷಸನ ಕೆಟ್ಟ ಹಸಿವಿಗೆ ಬರಿದಾಗಿರುವ ಊರ ಕೆರೆ,ತೊರೆ ,ಬಾವಿಗಳು . ಇಂತಹ ಹೃದಯ ವಿದ್ರಾವಕ ದೃಶ್ಯಗಳು ಬೇಡವೆಂದರೂ ಆಗಾಗ್ಗೆ ನಮ್ಮ ಕಣ್ಣ ಮುಂದೆ ಬಂದು ಆಗಾಗ ಸುಳಿದು ಹೋಗುತ್ತವೆ .ಇವು ಜಲಕ್ಷಾಮದ ಕೆಲವು ಮಾದರಿಗಳಷ್ಟೇ . ರೀತಿ ನೀರಿಗಾಗಿ ಎದ್ದಿರುವ ಆಕ್ರಂದನ ಮುಗಿಲು ಮುಟ್ಟಿದೆ .ನೀರಿಲ್ಲದ ಜಗತ್ತನ್ನು ನಾವು ಕನಸಿನಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯದ ಮಾತು .ಏಕೆಂದರೆ ,ನೀರು ಜೀವ ಸಂಕುಲದ ಮೂಲಾಧಾರ .ಆದರೆ ದುರಾಸೆ ಮನುಕುಲ ನಿಸರ್ಗ ಮಾತೆಯ ಮೇಲೆ ಮಾಡುತ್ತಿರುವ ವಿವೇಚನಾರಹಿತ ದುರಾಕ್ರಮನದ ಪ್ರತಿಫಲವೇ ಜಲಕ್ಷಾಮ.ಇದು ಕೇವಲ ಯಾವುದೋ ಒಂದು ರಾಷ್ಟ್ರದ ಕಥೆ -ವ್ಯಥೆಯಲ್ಲ ಇಡೀ ಪ್ರಪಂಚವೇ ಇದು ನೀರಿಗಾಗಿ ಪರಿತಪಿಸುತ್ತಿದೆ .ರಾಜ್ಯ,ರಾಷ್ಜ್ತ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ .ಭಾರತದಲ್ಲೇ ೧೯೪೭ ರಲ್ಲಿ ೬೦೦೮ ಕ್ಯುಬಿಕ್ ಮೀಟರ್ ನಷ್ತಿದ್ದ ನೀರಿನ ಪ್ರಮಾಣ ಈಗ ೨೨೬೬ ಕ್ಯುಬಿಕ್ ಮೀಟರ್ ಮಟ್ಟಕ್ಕೆ ಕುಸಿದಿದೆ .ಇದು ೧೦೦೦ ಮಟ್ಟಕ್ಕೆ ಇಳಿದಿದ್ದೆ ಆದರೆ ದೇಶದ ಅರ್ಥವ್ಯವಸ್ಥೆಯೇ ಕುಸಿದು ಬೀಳುತ್ತದೆ ಎಂದು ಟಾಟ ಎನರ್ಜಿ ಇನ್ಸ್ಟಿಟ್ಯೂಟ್ ಭವಿಷ್ಯ ನುಡಿದಿದೆ .
ಇನ್ನಾದರು ನಾವು ಎಚ್ಚೆತ್ತು ಕೊಲ್ಲದಿದ್ದರೆ ಭವಿಷ್ಯದ ಜನಾಂಗ ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ .ಮಳೆಯ ಒಂದು ಹನಿಯು ಸಾಗರ ಗರ್ಭವನ್ನು ಸೇರದಂತೆ ಎಚ್ಚರ ವಹಿಸಿ ನೀರನ್ನು ಅಭಿವೃದ್ಧಿ ಕಾರ್ಯಗಳಿಗೆ ಹೊತ್ತು ಭಗೀರಥರು ನಾವಾಗಬೇಕಿದೆ .


ನೀರಿನ ಸಂರಕ್ಷಣೆ ಹೇಗೆ ?
ನೀರು ಎಂಬ ಸಂಪತ್ತು ಮಿತವಾಗಿದೆ .ಆದರೆ ಅದು ಬಹು ಕಾರ್ಯಗಲಿ ಉಪಯೋಗಿಸಲ್ಪಡುತ್ತಿದೆ .ಇಂತಹ ಕೊರತೆಯ ಸಂಪನ್ಮೂಲವನ್ನು ಹೆಚ್ಚಿನ ಜಾಗರೂಕತೆಯಿಂದ ಅಗತ್ಯತತೆಗಲಿಗಾಗಿ ಉಪಯೋಗಿಸುವುದೇ ಜಲಸಂರಕ್ಷಣೆ .


}ದೇಶದ ಪ್ರತಿ ನಾಗರೀಕನು ಒಂದೊಂದು ಹನಿ ನೀರನ್ನು ಸುವರ್ಣ ಬಿಂದುಗಳೆಂದು ಪರಿಗಣಿಸಬೇಕು .


}ಮಳೆ ನೀರಿನ ಶೇಖರಣೆ ಮಾಡಿ ಶುದ್ಧೀ ಮಾಡುವ ಪ್ರಕ್ರಿಯೆ ವಿಧಾನಗಳು ಪ್ರತೀ ಮನೆಯನ್ನೂ ತಲುಪ ಬೇಕಾಗಿದೆ .ಇದರಿಂದ ಮಳೆ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುವುದನ್ನು ತಪ್ಪಿಸಬಹುದು .


}ಅಮೇರಿಕಾ ,ಥೈಲ್ಯಾಂಡ್ ,ಇಂಗ್ಲಂಡ್ ಇನ್ನಿತರ ರಾಷ್ಟ್ರಗಳಲ್ಲಿ ಸರ್ಕಾರದ ಅನುಮತಿಯಿಲ್ಲದೆ ಅಂತರ್ಜಲವನ್ನು ಬಳಸುವಂತಿಲ್ಲ .ಆದರೆ ಭಾರತದಲ್ಲಿ ಕೊಳವೆ ಬಾವಿಗಳನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ .ಇದರಿಂದ ಯು ಏನ್ ಡಿ ಪಿ ವರದಿಯ ಪ್ರಕಾರ ಪ್ರತಿವರ್ಷ %ಅಂತರ್ಜಲ ಕುಸಿಯುತ್ತಿದೆ .ಆದ್ದರಿಂದ ಸರ್ಕಾರ ಕೂಡಲೇ ಅಂತರ್ಜಲವನ್ನು ಸಂರಕ್ಷಿಸುವ ಪ್ರಭಾವಿ ಕಾಯ್ದೆಯನ್ನು ಜಾರಿಗೆ ತರಬೇಕು .ಅದನ್ನು ಬಿಟ್ಟು ಭೂ ತಾಯಿಯ ಗರ್ಭವನ್ನು ತೋಡಿ ತೋಡಿ ಕೊನೆಗೆ ಬತ್ತಿಸಿ ನೀರು ಬೇಕು ಮಳೆ ಬರಲಿಲ್ಲವೆಂದು ಕತ್ತೆ ಕಪ್ಪೆಗಳಿಗೆ ಮಾಡುವೆ ಮಾಡಿಸಿದರೆ ಸಮಸ್ಯೆ ನೀಗುತ್ತದೆಯೇ ?


}ಕೃಷಿ ಕ್ಷೇತ್ರದಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಹನಿ ನೀರಾವರಿ ಹಾಗು ತುಂತುರು ನೀರಾವರಿ ಪದ್ಧತಿಗಳನ್ನು ಇನ್ನೂ ಯಶಸ್ವಿಯಾಗಿ ಅಳವಡಿಸಬೇಕು .


}ಅರಣ್ಯ ನಾಶವನ್ನೂ ಕೂಡ ತಡೆಯಬೇಕು


}ಮನೆಯ ಆರ್ಥಿಕ ವ್ಯವಹಾರಗಳಿಗೆ ಹೇಗೆ ಹಣವನ್ನು ಮೀಸಲಿಡಲು ಬಜೆಟ್ಟನ್ನು ಮಾಡಿಕೊಳ್ಳುತ್ತೆವೆಯೋ ಹಾಗೆಯೇ ನೀರನ್ನು ಎಷ್ಟು ಬಳಸಿಕೊಳ್ಳ ಬೇಕು ?ಹೇಗೆ ಬಳಸಬೇಕು ?ಎಂಬ ವಾಟರ್ ಬಜೆಟ್ ಕಲ್ಪನೆಯೂ ಬೇಕು


}ಕೆಲವು ಕೃತಕ ಪಾನೀಯ ಕಂಪನಿಗಳು ಎಲ್ಲೆಂದರಲ್ಲಿ ನೆಲ ಅಗೆದು ನೀರನ್ನು ಉಪಯೋಗಿಸಿಕೊಳ್ಳುತ್ತಿವೆ ಅದರ ಬಗ್ಗೆಯೂ ಸರ್ಕಾರ ಗಮನಿಸ ಬೇಕು .
ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು ಇಂತಹ ಜೀವ ಜಲವನ್ನು ಸಮರ್ಪಕವಾಗಿ ಬಳಸಿ,ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ .ಒಂದೆಡೆ ಜನ ನೀರಿಲ್ಲದೇ ಬವಣೆ ಪಡುತ್ತಿದ್ದಾರೆ ಮತ್ತೊಂದೆಡೆ ಪ್ರವಾಹಗಳಿಂದ ನಷ್ಟ ಅನುಭವಿಸುತ್ತಿದ್ದಾರೆ .ಒಮ್ಮೆ ನೀರು ಮಲಿನವಾಗಿ ಜನ ಸತ್ತರೆ ಮತ್ತೊಂದೆಡೆ ಇದೆ ನೀರಿಗಾಗಿ ರಾಜ್ಯ ರಾಜ್ಯಗಳು ಹೊದೆದಾಡುತ್ತಿವೆ. ಎಲ್ಲಸಮಸ್ಯೆಗಳು ಇಂದು ನಿನ್ನೆಯದಲ್ಲ .ಇವಕ್ಕೆ ಸರ್ಕಾರ ಕೇವಲ ತಾತ್ಕಾಲಿಕ ಪರಿಹಾರ ವನ್ನಷ್ಟೇ ನೀಡಿವೆ . ಇದರಿಂದ ಸಮಸ್ಯೆ ಇನ್ನೂ ದ್ವಿಗುಣ ವಾಗಿದೆ .ಇನ್ನಾದರು ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ ?

ಓ ಚೇತನವೇ


ತೊರೆದು ಹೋಗದಿರು ಚೇತನವೇ

ಬಾನಂಗಳದ ವರ್ಷಧಾರೆಯಾಟದಮಿಂಚು ಬೆಳಕಿನ ದೀಪದಂತೆ

ಒಮ್ಮೆಲೇ ಕಂಡು ಮಗದೊಮ್ಮೆ ಮರೆಯಾದಂತೆ


ನೆಲೆಯೂರಿ ಬಿಡು ಆಲದ ಮರದ ವಿಶಾಲ ಬೇರುಗಳಂತೆ

ಪಸರಿಸಿ ಎನ್ನ ಧಮನಿ ಧಮನಿಗಳಲ್ಲಿ ಒಂದಾಗಿ ಜೀವಧಾತುವಾಗಿ

ಅಮೃತ ಬಳ್ಳಿಯಂತೆ ಸಮೀಕರಣವಾಗಿ


ನಿನ್ನ ಕೊಂಬೆಗಳು ಒಣಗಿ ಉರುಟದಿರಲಿ

ಎಲೆಗಳು ಹಣ್ಣಾಗಿ ಬೀಳದಿರಲಿ ನಿತ್ಯ ಪುಷ್ಪ ,ಫಲಗಳ

ಜನ್ಮಿಸಿ ತಂಗಾಳಿಯ ಸುಖ ಸ್ಪರ್ಶಕೆ ತಲೆದೂಗುತ ಹಾಡಿನರಮನೆಯ ಕಟ್ಟುತಲಿ


ಹ್ಹಾ !ಈಗ ನೀ ಎನ್ನ ತೊರೆಯಲಾರೆ ನರ ನರಗಳಲಿ ನಿನ್ನ

ಬೇರು ಬುಡವನ್ನೇ ಕೀಳುವವರಾರು ಇಲ್ಲ ಓ ನನ್ನ ಚೇತನವೇ

ನೀ ಇನ್ನು ಮುಂದೆ ನನ್ನ ಸುಪರ್ದಿಯಲ್ಲಿ .

ಸುಲಭವಲ್ಲ ಕಳೆದುಕೊಳ್ಳುವುದು !


ಕಳೆದುಕೊಳ್ಳುವುದೆಂದರೆ ಸುಲಭವಲ್ಲ

ಪ್ರೀತಿಯಾಗಲಿ ,ವಸ್ತುವಾಗಲಿ ಬಲು ನಿಷ್ಟುರವದು .


ಕಳೆದುಕೊಳ್ಳುವುದೆಂದರೆ ಅದು ತೊಟ್ಟಿಲ

ಕಂದ ರೆಪ್ಪೆಯ ಒಂದೇ ಬಡಿತದಲಿ ಮಾಯವಾದಂತೆ ,

ಬಾಯಾರಿ ದಣಿದು ಹುಡುಕಿ ಹುಡುಕಿ ಕೆರೆಗಿಳಿದು

ಬೊಗಸೆಗಳಲಿ ತುಂಬಿಸಿದ ಜೀವ ಜಲ ಬತ್ತಿದಂತೆ .


ಕಳೆದುಕೊಳ್ಳುವುದೆಂದರೆ ಕಂಡ ವಿಶಾಲ ಕಡಲು ಕ್ಷಣ

ಮಾತ್ರದಲೇ ಆಕಾಶನಪ್ಪಿ ಕಾಣದ ಕಡಲಾದಂತೆ

ಹೃದಯ ತಂತಿಯ ಜಗ್ಗಿ ಎಳೆದು ಭಾವಗಳ ಸೀಳಿ

ಪುರಪುರನೆ ಉರಿವ ಖಾರದ ಪುಡಿಯ ಒಳಗೆ ತುರುಕಿದಂತೆ .

ಬದುಕೇ ಇಷ್ಟು !ಸಂತಸವೇಕೆ ನನಗೆಲ್ಲ ಇದೆಯಂದು ?


ಹೆಣೆದುಕೊಂಡ ಭ್ರಮೆ ,ಕಲ್ಪನೆ ,


ಬೆಸೆದ್ಕೊಂದ ಭಾಂದವ್ಯ ,ಬೆಳೆದು ಬಂದ ಸಂಭಂದ


ತೊರೆಯಲೆಬೇಕಲ್ಲ ಕಾಲನ ಕರೆ ಬಂದಾಗ !ಸ್ವಾರ್ಥವೆಕೆ ನನಗೆಲ್ಲ ಬೇಕೆಂದು ?


ಹೊತ್ತಿದ ಕರ್ಪೂರ ಕರಗಿ ಮಾಯವಾದಂತೆ


ನೀ ಶ್ರೆಷ್ಟನೋ ಕನಿಷ್ಟನೋ ವಿಧಿಯಾಟ


ಕೊನೆಯಾದಾಗ ನೀ ಸೋಲಲೇ ಬೇಕಲ್ಲ !ಅಯ್ಯೋ !ಚಿಂತೆಯೇಕೆ ನಾನು ಶಾಶ್ವತನಲ್ಲನೆಂದು ?


ನೀನೇನು ಚುಕ್ಕಿ , ಚಂದಮ ,ನೇಸರನಲ್ಲವಲ್ಲ


ಬಿಡುವಿಲ್ಲದೆ ಬಾನಿಗಂತಿ ಕ್ಷಣ ಕ್ಷಣವೂ ಲೆಕ್ಕಾಚಾರದಲಿ


ಬದುಕುವ ಜಾಯಮಾನ ಮಾಡಿಕೊಳ್ಳಲು !ಚಿಂತೆಯೇಕೆ ನನಗಾರು ಇಲ್ಲವೆಂದು ?


ಹೆತ್ತವ್ವನ ಗರ್ಭದಲಿ ಮೊಳೆತು ಮಾಂಸದ


ಮುದ್ದೆಯಾಗಿ ನವಮಾಸ ಕಣ್ ಮುಚ್ಚಿ


ಕಳೆದು ಹೊರಬರುವವರೆಗೂ ನಿನಗಾರಿದ್ದರು ?


ಅವ್ಯಕ್ತಾನಂದ


ಹೊನ್ನ ಕಿರಣ ಮೆತ್ತಿದ ಮುಖಾರನ್ದವಿಂದದ

ಮುಗ್ಧತೆ ,ಹವಳ ತುಟಿಯಂಚಿನ ನಗೆಯ

ಶುಭ್ರತೆಯ ವಿಜ್ರುಮ್ಬಿಸಿ ಮುದವಾಗಿ,

ಹದವಾಗಿ ಹೆಣೆದು ಕೊಂಡವು ಕನಸುಗಳು .


ನಿನ್ನ ಕಂಗಳ ಮಿಂಚಿಗೆ ಇರುಳೂ ಹಗಲಾಗಿ

ಮನದ ತುಂಬೆಲ್ಲ ಲಕ್ಷ ದೀಪಗಳ ಹೊಳಪು

ಪ್ರತಿಬೆಳಕಿಗೂ ಮಾತು ಮುತ್ತಾಗಿಸಿ ಭಾವ

ದೊಲುಮೆಯ ಗೂಡು ಕಟ್ಟುವ ಮುಗಿಲಗಲದ ಕನಸು .


ನಿನ್ನ ಮೋಹಕ ನುಡಿಗೆ ತುಂತುರು ಮಳೆ ಬಿರಿದು

ನೆಲವ ಮುತ್ತಿಕ್ಕಿ ,ಜಾಲಿ ಮರದಲ್ಲಿ ಮಲ್ಲಿಗೆ ಮೊಗ್ಗು

ಬಿರಿದು ,ಸುಡು ಸುಡು ಬೇಗೆಯಲ್ಲಿ ನೆಳಲು ಸಿಕ್ಕಿ

ಸುಮ್ಮನಿಹ ಮನದಲ್ಲಿ ತಂಗಾಳಿ ಬೀಸಿದಂತಹ ಅನುಭವ !


ನಿನ್ನ ಕೆಮ್ಪುಕೆನ್ನೆಯ ಗುಳಿಯ ಆಕರ್ಷಣೆಗೆ ವ್ಯಕ್ತದಲೂ

ಅವ್ಯಕ್ತಭಾವ ,ವರ್ಣನೆಯಲೂ ಅವರ್ಣನೀಯದಾನಂದ

ಹೊಮ್ಮಿ ನೆಲಕಚ್ಚಿ ನಿಂತ ಕಾಲಗಳು ನೆಲ ಬಿಟ್ಟು ಹಾರಿ

ಬಾನ ತಾರೆಗಳ ಸ್ಪರ್ಶಿಸಿದಂತಹ ಪುಳಕ .


Thursday, March 26, 2009

ಬದುಕೆಷ್ಟು ಸುಂದರ


ಆಹಾ !ಬದುಕೆಷ್ಟು ಸುಂದರ

ಮುಂಜಾನೆಯ ಇಬ್ಬನಿಯು ಚಿಗುರೆಲೆಗಳ

ಮುತ್ತಿಕ್ಕಿ ಭಾವೊನ್ಮಾದಿತವಾದ ರಸ ಚಿತ್ರಣವ

ಕಣ್ ತುಂಬಿಸಿ , ಆಕಳಿಸಿ ಮೈ ಮುರಿಯುವಾಗ


ಚಂದ್ರಮ ಮರೆಯಾಗಿ ನೇಸರನು

ಸಪ್ತಾಶ್ವಗಳ ಏರಿ ಪತ್ರಗಳು ಅದಲು ಬದಲಾಗಿ

ಹಕ್ಕಿಗಳ ರೆಕ್ಕೆ ಹರಡಿ ,ಕೊರಳುಗಳು ಉಲಿದು

ಲಜ್ಜೆಯಲಿ ಹೂ ಗಳು ಮೈನೆರೆಯುವಾಗ


ದಿವಾಕರನ ಕೋಟಿ ಕಿರಣಗಳು ಇಳೆಯಪ್ಪಿ

ಕಲ್ಲೂ ಹೂವಾಗಿ ಅರಳಿ ,ಪ್ರತಿ ಪ್ರಾಣದಲ್ಲೂ

ಜೀವ ಚೈತನ್ಯ ಉಜ್ವಲಿಸಿ ,ವಿಶ್ವೊತ್ಸಾಹದ

ಬೆಳಕು ಆತ್ಮಗಳಲಿ ಕುಣಿದಾಡುವಾಗ


ನೆಲ , ಜಲ ,ಭಾನು ರಂಗೇರಿ

ಪ್ರಕೃತಿಯಲಿ ನಾನು ಒಂದೆಂದು ಸಂಭ್ರಮಿಸಿ

ಅಂಬರವ ದಿಟ್ಟಿಸಿ ನಿನ್ನೊಳಗೆ ನಾನೂ ?

ನನ್ನೊಳಗೆ ನೀನೋ ? ಎಂಬಂತೆ ಪುಳಕಿತವಾದಾಗ !

ಬದುಕೆಷ್ಟು ಸುಂದರ

Wednesday, March 25, 2009

ಬಲಿದಾನ


ಅಗೋ ನೋಡಿ ಕದನ ಕಣದಿ ವೈರಿ ಪಡೆಯ
ಕುತಂತ್ರ ಸಿಡಿವ ಬಾಂಬುಗಳ ಮಧ್ಯದಿ
ಬಲಿದಾನಗೈದ ಅಮರ ಯೋಧರ
ರಕ್ತ ಸಿಕ್ತ ಕಾಯಗಳು ಸಾಗುತಿವೆ

ಭೀಕರ ಯುದ್ಧದಿ ಗುಂಡೇಟು ಗಳಿಗೆ ನಲುಗಿ
ಜೀವನ್ಮರಣ ದಲಿ ಸಿಲುಕಿ ಯಮನೊಂದಿಗೆ
ಹೋರಾಟ ಮಾಡುತಲಿ ,ಯೋಧರ
ಆತ್ಮಗಳು ಅವ್ಯಕ್ತ ಯಾತನೆಯ ಅನುಭವಿಸುತಲಿವೆ .

ಕೊರೆವ ಚಳಿಯಲಿ ಬೆಂಡಾಗಿ ,ಸುಡು ಬಿಸಿಲಿನಲ್ಲಿ
ಕೆಂಪಾಗಿ ,ಪ್ರಾನತರ್ಪನಗೈಯ್ದ ನಿಷ್ಪಾಪಿ ವೀರ
ಯೋಧರ ಆತ್ಮಗಳು ವೀರ
ಸ್ವರ್ಗದ ಹಾದಿ ಹಿಡಿಯುತಿವೆ .

ಮಾತೃ ಭೂಮಿಯ ಉಳಿಸಲು
ಸಮರದಿವೀರಕಂಕನವ ತೊಟ್ಟು ಬುಗಿಲೆದ್ದ ಬೆಂಕಿ ,
ಧೂಮ ಆಸ್ಪೋಟಗಳಲಿ ಅಗಲಿದ ವೀರನ
ನೆನೆದು ನಮ್ಮ ಕಂಗಳು ಅಶ್ರುಧಾರೆಯ ಸುರಿಸುತಲಿವೆ .

ಮಾಂತ್ರಿಕ ಮಳೆ


ಅದೆಂತಹ ಕಲೆಗಾರಿಕೆ ನಿನ್ನದು ಮಳೆಯೇ !
ಚಿಗುರುಗಳ ಬರೆದು ,ಹೂ ಮೊಗ್ಗುಗಳ ಬಿಡಿಸಿ
ಹಸಿರು ಚಿತತಾರಗಳ ಮೊಒಡಿಸಿ ,ಹಳ್ಳ ಕೊಳ್ಳಗಳಿಗೆ
ಕೆಮ್ಬನ್ನವ ತುಮ್ಬಿಸುವಷ್ಟು !

ಅದೆಂತಹ ರಸಿಕತೆ ನಿನ್ನದು ಮಳೆಯೇ
ಅರಳಿದ ಮುಸ್ಸಂಜೆಯಲಿ ಭಾವ ಬಿಂದುಗಳ
ಭೋರ್ಗರಿಸಿ ,ಇಳೆಯ ನಾಚಿಕೆಯಲಿ ಕೆಂಪಾಗಿಸಿ,
ಮುದ್ದೆಯಾಗಿಸಿ ಮುತ್ತಿನ ಅಲಂಕಾರಗೈಯುವಷ್ಟು !

ಅದೆಂತಹ ಶಕ್ತಿಯು ನಿನ್ನದು ಮಳೆಯೇ
ಭಾವ ಜೀವಂತಿಕೆಯ ಬರುವಿಕೆಗೆ ಕಾದ ಕನ್ಗಳನ್ನು
ತಂಪಾಗಿಸುವಷ್ಟುಈ ಕವಿ ಹೃದಯಕ್ಕೆ
ಜೀವಧಾರೆಯಾಗಿ ಹಸಿರಾಗಿಸುವಷ್ಟು !

ಅದೆಂತಹ ಲೀಲೆಯು ನಿನ್ನದು ಮಳೆಯೇ
ಎಲ್ಲೋ ಹುಟ್ಟುವ ಮೇಘಗಳ ಎಲ್ಲೋ ಕರೆತಂದು
ಮಳೆಗರೆಸಿ ಇಳೆಯಪ್ಪುವ ಪ್ರತಿ ಬಿಂದುಗಳಲ್ಲೂ
ನಾದ ,ಗಂಧಗಳ ಹೊಮ್ಮಿಸುವಷ್ಟು !

ಅದೆಂತಹ ಮಾಂತ್ರಿಕತೆ ನಿನ್ನದು ಮಳೆಯೇ
ಮಣ್ಣ ಕಣ ಕಣಕೂ ಜೀವ ತುಂಬಿ ,ಫಳ ಫಳ ಸುವ
ತಾರಾಗಣ ,ಬೆಳ್ಳನೆಯ ಚಂದಮನನ್ನೂ ಮರೆಯಾಗಿಸಿ
ಮಿಂಚಿನ ಸಂಚಾರದಲ್ಲೇ ಕತ್ತಲ ಕೊನೆಯಾಗಿಸುವಷ್ಟು