Tuesday, April 14, 2009

ಮರೆಅಯಲೆಂತು ನಿನ್ನ !!!?


ಮರೆಯಲೆಂತು ಆದದ್ದೆಲ್ಲವ ?

ಚಿರಕಾಲವೀ ನೆನಹುಗಳು .ಪಾರ್ಥನ

ಇಟ್ಟ ಗುರಿ ,ಬಿಟ್ಟ ಬಾಣದಂತೆ

ನೇರ ಹೃದಯವ ಛೇದಿಸುವುದು .

ಕಳೆದ ನಿನ್ನೆಗಳ ಕಹಿ ನೆನಹುಗಳಿಗೇಕೆ

ನನ್ನಿಂತು ಕಾಡಿ ಪೀಡಿಸುವ ಚಪಲ?

ಇಲ್ಲ ಸಲ್ಲದ ನೆಪಹೊತ್ತು ಕರೆಯದ

ಅತಿಥಿಯಂತೆ ಬಂದೇಕೆ ಸುಳಿದುಹೋಗುವುದು?

ಬೆಂಬಿಡದೆ ಕಾಡಿ ಹುಚ್ಚೆದ್ದು ಕುಣಿವ ಈ ಪರಿಗೆ

ಬೇಸೆತ್ತು,ಮುನಿದು ಕೋಪ ಕಾರಿದರೆ

ಅಡಗಿ ಮತ್ತೇಕೆ ನುಸುಳಿ ಕಾಯ ಬಿಚ್ಚಿ

ಎದೆ ಮೇಲೆ ಕಾಲಿಟ್ಟು ಗಹ ಗಹಿಸಿ ನಗುವುದು ?

ಬಿಟ್ಟು ಹೋದ ಸಂಬಂಧಗಳ ಮೂಹಪಾಶದಿ ಬಳಸಿ ,

ತಲ್ಲಣಗಳ ವ್ರುಧ್ಧಿಸಿ ,ಶಾಂತತೆಯ ಕದಡಿ ,

ಅಳುವ ಅರಳಿಸಿ ,ನಗುವ ಮುದುಡಿಸಿ

ಸಂಭ್ರಮಿಸುತ ದಾಹವನ್ನೇಕೆ ತಣಿಸಿಕೊಳ್ಳುವುದು?

ಬೇಡ !!! ಪೀಡಿಸದಿರು ನೆನಪೇ ........................

ಎನ್ನ ಕಾಡುವ ನಿನ್ನ ಸಾಂಗತ್ಯಕ್ಕೆ ಕುಣಿಕೆ ಏರಿಸಿ

ಅಂತ್ಯ ಮಾಡಿ ಅಂದೇ ಶ್ರದ್ಧಾಂಜಲಿಯ ಅರ್ಪಿಸಿದೆ

ಆದರೂ ........ಆದರೂ................

ಮತ್ತೆ ಬಂದಿರುವೆಯಲ್ಲ

Sunday, April 12, 2009

ಕವಿ ಹೃದಯ



ಮತ್ಸರ ಬೇಡ ಗೆಳೆಯ
ಕವಿ ಹೃದಯವ ನೀ ಚಿವುಟಲಾರೆ
ಭಾವ ಪನ್ನೀರ ಬಿಂದುಗಳ
ಸಿಂಚಿಸಿ ಧಮನಿ ಧಮನಿಗಳಲ್ಲೂ
ಸ್ಫೂರ್ತಿಯ ಸೃಜಿಸುವ ಎನ್ನ
ಕಾವ್ಯ ಶಕ್ತಿಯ ನೀ ತಡೆಯಲಾರೆ
ಮನದೊಳು ಗುಪ್ತಗಾಮಿನಿಯಾಗಿ
ಹರಿವ ಸ್ನೇಹ ಸೌದಾಮಿನಿಯಡಿ
ಹೊರಬಂದ ಅನುರಾಗವ ನಿಲ್ಲಿಸಲಾರೆ
ಭಾವಾನುರಾಗದ ಮಧುರಾಲಾಪವ
ನೀ ಅಪಸ್ವರದಿ ಮುಳುಗಿಸಲಾರೆ
ಕವಿ ಹೃದಯದ ಭಾವ ಸಂಚಲನೆಗಳ
ಸಂವೇದನೆಯ ವಿಜಯ ದುಂಧುಬಿಯ
ಮೊಳಗಿಸುವ ಕಾವ್ಯ ಮದ್ದಳೆಯ
ಪಕ್ಕಕ್ಕೆ ದೂಡಲಾರೆ,ಪದಗಳ ಮುದ್ದಿಸಿ ,
ಕುಣಿಸಿ ,ಲಾಲಿಸಿ ,ನಲಿಸಿ ಹುಟ್ಟಿಸಿದ
ಕವನದ ಹೊಳೆಯೊಳು ಎನ್ನ ಕೆಣಕಿದ
ನೀ ಕೊಚ್ಚಿ ಹೋಗುವೆ ಗೆಳೆಯ

Wednesday, April 8, 2009

ಆಕಳಿಕೆ



ಇರುಳಲಿ ಶಶಿ ಬಂದನೆಂದರೆ ಇದೇ ಗೋಳು

ಎದೆಯಾಳದ ನೆನಪುಗಳ ಮೂಕರಾಗಕೆ ನಾನಾಗುವೆ ಜೀತದಾಳು

ದಿನದ ಪ್ರೀತಿ ಮೊಳೆತು ಭಾವ ಬೆಳೆದು ಈ ನಿಶೆ ಬಂದಾಗ

ಮನ ಮಂದಿರ ಪಾಳು ಬರೇ ಹಾಳು ಸಾಕು

ಛೇ !ಈ ಕಾಲ ಪುರುಷ ಮಗ್ಗುಲು ಬದಲಿಸಿದರೆ ಸಾಕು ಕೊನೆಯಾಗುವುದು

ಆ ಕ್ಷಣ ಈ ಭಾವ ಬಿಕ್ಕಳಿಕೆ ,ವಿರಹದ ನರಳಿಕೆ

ಚಂದ್ರನಿಗೂ ಬರುವುದು ಆ ಹೊತ್ತಿಗೆ ಒಂದಾದ ಮೇಲೆ ಒಂದಂತೆ

ಆಕಳಿಕೆ .

ಹುಡುಕಾಟ



ಎಷ್ಟು ಹುಡುಕುವುದೋ ನಾ ಬೇರೆ ಕಾಣೆ

ಆ ಮಗ್ಗುಲು ಈ ಮಗ್ಗುಲು ಎಲ್ಲೂ ಕಾಣುತ್ತಿಲ್ಲ

ಅಲ್ಲೇ ಕೂಡಿ ಹಾಕಿದ್ದೆ ಕೈ ತಪ್ಪಿ ಪರರ ಪಾಲಾಗಿದೆಯಮ್ಬ

ಆತಂಕದಲ್ಲಿ ,ಇಲ್ಲ !ಅಲ್ಲೇ ಇದ್ದ ನೆನಪು !

ನೆನಪು ವಂಚಿಸುವುದಿಲ್ಲ .ಅಂದು ಕಂಡದ್ದು ಕಂಡು ಇಚ್ಚಿಸಿದ್ದು

ಇಚ್ಚಿಸಿ ಕರೆ ತಂದಿದ್ದು ಆ ಸುಕೋಮಲ ಸ್ಪರ್ಶಕ್ಕೆ ಮನಸೋತು ಎದೆಗಪ್ಪಿ

ಚುಂಬಿಸಿ ಇದೇ ಪುಸ್ತಕದ ಪುಟವೊಂದರಲ್ಲಿ ಅಡಗಿಸಿಇಟ್ಟಿದ್ದೆ

ಎಲ್ಲಿ ಮರೆಯಾಯಿತೋ ಆ ನವಿಲು ಗರಿ ?

ಪ್ರಯತ್ನ ಬೇಕಷ್ಟೇ



ಬಹುಕಾಲ ಒಂದೇ ಕಡೆ ಪ್ರದಕ್ಷಿಣೆ ಹಾಕಿ ಶಕ್ತಿ ಕುಂದಿ ಸುಸ್ತಾಗಿ

ನಿಂತಿದೆ .ವಿಧ ವಿಧ ಭಂಗಿಗಳ ವ್ಯಾಯಾಮಕ್ಕೆ ಅತ್ತ ಇತ್ತ ತಿರುಗಿ ತಿರುಗಿ

ಕೈಗಳು ಸೋತು ನೆಲ ಕಚ್ಚಿವೆ .ದಡ ಬಡ ನಡೆದಾಡಿ ಪ್ರತಿ ಕ್ಷಣವೂ ಮಾತಾಡಿ

ಬಾಯಾರಿ ಈಗ ಮೌನ ರೆಕ್ಕೆ ಬಿಚ್ಚಿ ಮನೆಯೆಲ್ಲ ಬಿಕೋ ಎನಿಸುತಿದೆ

ಚಿಂತೆಯೇಕೆ ಮಾಡುವಿರಿ ಒಮ್ಮೆ ಕೀಲಿ ಕೊಟ್ಟು ನೋಡಿ ಮತ್ತೆ ಪ್ರಾರಂಭಿಸುವುದು

ತನ್ನ ವ್ಯವಹಾರವ ನಿಂತಿರುವ ಈ ಗಡಿಯಾರ !

Tuesday, April 7, 2009

Monday, April 6, 2009

ಕನಸು

ಹಗಲೊಳು ನೂರಾರು ಆಸೆ ಹೂಗುಚ್ಚಗಳ
ಮನದಿ ಸೇರಿಸಿ,ಇರುಳೊಳು ನಿದ್ರಾದೇವಿಯ
ಬೆಚ್ಚನೆಯ ಮಡಿಲೋಳು ತಲೆಯಿಟ್ಟು
ದ್ವಂದ್ವ ,ತಾಕಲಾಟಗಳ ಬದಿಗೊತ್ತಿ ,
ಮೈಮರೆತು ನಿದ್ರಿಸಿ ,ನಿಗೂಢ
ಲೋಕದಿ ಪಯಣಿಸಿದ ಕನಸು
ನೀಲಿಗಗನದ ತುಂಬಾ ಗರಿಗೆದರಿ
ಮೇಘಗಳ ಚುಮ್ಬಿಸಿದಂತೆ ತಾರೆಗಳ ಕಂಡು
ಉಳಿದಂತೆ ,ಚಂದ್ರಲೋಕದ ಕ್ಷೀರ ಸಾಗರದಿ
ಮಿಂದು ಬಂದಂತೆ ,ಸುಮನೋಹರ ಶ್ವೇತ ಮುತ್ತುಗಳ ಹೊತ್ತು ತಂದು
ಮಧುರಾನಂದವ ಪಡೆದಂತೆ ಕನಸು
ಅದೃಶ್ಯ ಮನದೊಳು ಅಡಗಿ ಕುಳುತಿಹ
ಭಾವವ ಕೆಣಕಿ ,ಚಿಂತೆಗಳ ಮಥಿಸಿ
ಎಚ್ಚರ -ನಿದ್ರೆಗಳ ತ್ರಿಶಂಕು ಸ್ಥಿತಿಯ
ಕಡಲ ತೆರೆಗಳಿಂದ ಉಮ್ಮಳಿಸಿ ಬಂದ
ಸುಪ್ತ ಸಂದೇಶಗಳ ಹೊತ್ತು ತಂದಂತೆ ಕನಸು
ಜಗದ ವಿಕೋಪ ,ವೈಪರಿತ್ಯ ,ಅನಿವಾರ್ಯ ,
ಅನಿಶ್ಚತೆಗಳ ಮರೆತು ,ವಸುಂಧರೆಯ ಗರ್ಭವ
ಹೊಕ್ಕಿ ಹೊನ್ನು ,ವೈಧುರ್ಯಗಳ ಹುಡುಕಿ ,
ಹಿಡಿದು , ಆರಿಸಿ ,ಜಾಲಾಡಿಸಿ
ಅಮೂಲ್ಯ ಭವಿತವ್ಯದ ಕ್ಷಣಗಳ
ನೆನೆದು ಸಂಭ್ರಮಿಸಿದ ಕನಸು

ಕಾಣದೂರಿಗೆ ಪಯಣ !

ಕಾಣದೂರಿಗೆ ಬಂಡಿ ಹೊರಟಿದೆ
ದಾರಿ ಎಷ್ಟು ದೂರವಿದೆಯೋ ?ಎನ್ತಿದೆಯೋ
ಸಾಗುತಿದೆ ಬಂಡಿ ಆಸೆ ,ಕನಸು,ಪ್ರೀತಿ
ಸ್ವಾರ್ಥ ,ರಾಗಾನುರಾಗಗಳ ಹೊತ್ತು ಸಂಭ್ರಮದಲ್ಲಿ
ಕಳೆದ ನಿನ್ನೆಗಳು ,ಮೊಳೆವ ನಾಳೆಗಳು
ಮೂದುತಿರುವ ಇಂದಿಗಾಗಿ ಸಾಗಿದೆ ,ಸಾಗುತಲಿದೆ
ಸಾಗಲಿದೆ ಆ ಬಂಡಿ ಮೂರಕ್ಕಿಳಿಯದೆ
ಆರಕ್ಕೆಲದೆ ನೂರಾರು ಜಂಜಾಟಗಳಲ್ಲಿ ಸಿಲುಕಿ
ಸಾಕಪ್ಪಾ ಸಾಕೀ ಪಯನವೆಂದ ಬಂದಿಹೊತ್ತ ಒಂಟಿ
ಎತ್ತಿನ ಮೇಲೆ ಸಾಹೇಬನ ಚುರುಗುಡುವ ಚಡಿಯೇಟು
ಬೆನ್ನಿಗಂಟಿದ ಅವನ ಜೋಳಿಗೆಯಲ್ಲಿ ಪಾಪ ಪುಣ್ಯಗಳ
ಲೆಕ್ಕಾಚಾರಗಳೆಷ್ಟಿವೆಯೋ ಯಾರಿಗೆ ಗೊತ್ತು ?
ಒಮ್ಮೆ ಸರಾಗದ ಪಯಣ ,ಮಗದೊಮ್ಮೆ ತೆವಳಾಟ ,
ವೇಳೆಗೆ ಮೊದಲಾಗಲಿ ,ತಡವಾಗಲಿ
ಊರಸೆರುವಂತಿಲ್ಲ .ಎಲ್ಲವೂ ಮೊದಲೇ
ನಿರ್ಧರಿತ ,ಸಾಹೇಬನ ಅಣತಿಯ ಮೀರುವಂತಿಲ್ಲ
ಕೊನೆವರಗೂ ಸಾಗಲೇ ಬೇಕೀ ಪಯಣ
ಜಗ್ಗದೆ ,ಕುಗ್ಗದೆ ,ಹಿಗ್ಗದೆ ರಹದಾರಿ ತುಂಬ
ಭೂತಕಾಲದ ನೂರಾರು ಬಂಡಿ ಚಕ್ರಗಳ
ಗುರುತು ,ಉಳಿಯುವುದೇ ಈ ಬಂಡಿಯ ಗುರುತು ?