Friday, March 27, 2009

ಓ ಚೇತನವೇ


ತೊರೆದು ಹೋಗದಿರು ಚೇತನವೇ

ಬಾನಂಗಳದ ವರ್ಷಧಾರೆಯಾಟದಮಿಂಚು ಬೆಳಕಿನ ದೀಪದಂತೆ

ಒಮ್ಮೆಲೇ ಕಂಡು ಮಗದೊಮ್ಮೆ ಮರೆಯಾದಂತೆ


ನೆಲೆಯೂರಿ ಬಿಡು ಆಲದ ಮರದ ವಿಶಾಲ ಬೇರುಗಳಂತೆ

ಪಸರಿಸಿ ಎನ್ನ ಧಮನಿ ಧಮನಿಗಳಲ್ಲಿ ಒಂದಾಗಿ ಜೀವಧಾತುವಾಗಿ

ಅಮೃತ ಬಳ್ಳಿಯಂತೆ ಸಮೀಕರಣವಾಗಿ


ನಿನ್ನ ಕೊಂಬೆಗಳು ಒಣಗಿ ಉರುಟದಿರಲಿ

ಎಲೆಗಳು ಹಣ್ಣಾಗಿ ಬೀಳದಿರಲಿ ನಿತ್ಯ ಪುಷ್ಪ ,ಫಲಗಳ

ಜನ್ಮಿಸಿ ತಂಗಾಳಿಯ ಸುಖ ಸ್ಪರ್ಶಕೆ ತಲೆದೂಗುತ ಹಾಡಿನರಮನೆಯ ಕಟ್ಟುತಲಿ


ಹ್ಹಾ !ಈಗ ನೀ ಎನ್ನ ತೊರೆಯಲಾರೆ ನರ ನರಗಳಲಿ ನಿನ್ನ

ಬೇರು ಬುಡವನ್ನೇ ಕೀಳುವವರಾರು ಇಲ್ಲ ಓ ನನ್ನ ಚೇತನವೇ

ನೀ ಇನ್ನು ಮುಂದೆ ನನ್ನ ಸುಪರ್ದಿಯಲ್ಲಿ .

ಸುಲಭವಲ್ಲ ಕಳೆದುಕೊಳ್ಳುವುದು !


ಕಳೆದುಕೊಳ್ಳುವುದೆಂದರೆ ಸುಲಭವಲ್ಲ

ಪ್ರೀತಿಯಾಗಲಿ ,ವಸ್ತುವಾಗಲಿ ಬಲು ನಿಷ್ಟುರವದು .


ಕಳೆದುಕೊಳ್ಳುವುದೆಂದರೆ ಅದು ತೊಟ್ಟಿಲ

ಕಂದ ರೆಪ್ಪೆಯ ಒಂದೇ ಬಡಿತದಲಿ ಮಾಯವಾದಂತೆ ,

ಬಾಯಾರಿ ದಣಿದು ಹುಡುಕಿ ಹುಡುಕಿ ಕೆರೆಗಿಳಿದು

ಬೊಗಸೆಗಳಲಿ ತುಂಬಿಸಿದ ಜೀವ ಜಲ ಬತ್ತಿದಂತೆ .


ಕಳೆದುಕೊಳ್ಳುವುದೆಂದರೆ ಕಂಡ ವಿಶಾಲ ಕಡಲು ಕ್ಷಣ

ಮಾತ್ರದಲೇ ಆಕಾಶನಪ್ಪಿ ಕಾಣದ ಕಡಲಾದಂತೆ

ಹೃದಯ ತಂತಿಯ ಜಗ್ಗಿ ಎಳೆದು ಭಾವಗಳ ಸೀಳಿ

ಪುರಪುರನೆ ಉರಿವ ಖಾರದ ಪುಡಿಯ ಒಳಗೆ ತುರುಕಿದಂತೆ .

ಬದುಕೇ ಇಷ್ಟು !



ಸಂತಸವೇಕೆ ನನಗೆಲ್ಲ ಇದೆಯಂದು ?


ಹೆಣೆದುಕೊಂಡ ಭ್ರಮೆ ,ಕಲ್ಪನೆ ,


ಬೆಸೆದ್ಕೊಂದ ಭಾಂದವ್ಯ ,ಬೆಳೆದು ಬಂದ ಸಂಭಂದ


ತೊರೆಯಲೆಬೇಕಲ್ಲ ಕಾಲನ ಕರೆ ಬಂದಾಗ !



ಸ್ವಾರ್ಥವೆಕೆ ನನಗೆಲ್ಲ ಬೇಕೆಂದು ?


ಹೊತ್ತಿದ ಕರ್ಪೂರ ಕರಗಿ ಮಾಯವಾದಂತೆ


ನೀ ಶ್ರೆಷ್ಟನೋ ಕನಿಷ್ಟನೋ ವಿಧಿಯಾಟ


ಕೊನೆಯಾದಾಗ ನೀ ಸೋಲಲೇ ಬೇಕಲ್ಲ !



ಅಯ್ಯೋ !ಚಿಂತೆಯೇಕೆ ನಾನು ಶಾಶ್ವತನಲ್ಲನೆಂದು ?


ನೀನೇನು ಚುಕ್ಕಿ , ಚಂದಮ ,ನೇಸರನಲ್ಲವಲ್ಲ


ಬಿಡುವಿಲ್ಲದೆ ಬಾನಿಗಂತಿ ಕ್ಷಣ ಕ್ಷಣವೂ ಲೆಕ್ಕಾಚಾರದಲಿ


ಬದುಕುವ ಜಾಯಮಾನ ಮಾಡಿಕೊಳ್ಳಲು !



ಚಿಂತೆಯೇಕೆ ನನಗಾರು ಇಲ್ಲವೆಂದು ?


ಹೆತ್ತವ್ವನ ಗರ್ಭದಲಿ ಮೊಳೆತು ಮಾಂಸದ


ಮುದ್ದೆಯಾಗಿ ನವಮಾಸ ಕಣ್ ಮುಚ್ಚಿ


ಕಳೆದು ಹೊರಬರುವವರೆಗೂ ನಿನಗಾರಿದ್ದರು ?


ಅವ್ಯಕ್ತಾನಂದ


ಹೊನ್ನ ಕಿರಣ ಮೆತ್ತಿದ ಮುಖಾರನ್ದವಿಂದದ

ಮುಗ್ಧತೆ ,ಹವಳ ತುಟಿಯಂಚಿನ ನಗೆಯ

ಶುಭ್ರತೆಯ ವಿಜ್ರುಮ್ಬಿಸಿ ಮುದವಾಗಿ,

ಹದವಾಗಿ ಹೆಣೆದು ಕೊಂಡವು ಕನಸುಗಳು .


ನಿನ್ನ ಕಂಗಳ ಮಿಂಚಿಗೆ ಇರುಳೂ ಹಗಲಾಗಿ

ಮನದ ತುಂಬೆಲ್ಲ ಲಕ್ಷ ದೀಪಗಳ ಹೊಳಪು

ಪ್ರತಿಬೆಳಕಿಗೂ ಮಾತು ಮುತ್ತಾಗಿಸಿ ಭಾವ

ದೊಲುಮೆಯ ಗೂಡು ಕಟ್ಟುವ ಮುಗಿಲಗಲದ ಕನಸು .


ನಿನ್ನ ಮೋಹಕ ನುಡಿಗೆ ತುಂತುರು ಮಳೆ ಬಿರಿದು

ನೆಲವ ಮುತ್ತಿಕ್ಕಿ ,ಜಾಲಿ ಮರದಲ್ಲಿ ಮಲ್ಲಿಗೆ ಮೊಗ್ಗು

ಬಿರಿದು ,ಸುಡು ಸುಡು ಬೇಗೆಯಲ್ಲಿ ನೆಳಲು ಸಿಕ್ಕಿ

ಸುಮ್ಮನಿಹ ಮನದಲ್ಲಿ ತಂಗಾಳಿ ಬೀಸಿದಂತಹ ಅನುಭವ !


ನಿನ್ನ ಕೆಮ್ಪುಕೆನ್ನೆಯ ಗುಳಿಯ ಆಕರ್ಷಣೆಗೆ ವ್ಯಕ್ತದಲೂ

ಅವ್ಯಕ್ತಭಾವ ,ವರ್ಣನೆಯಲೂ ಅವರ್ಣನೀಯದಾನಂದ

ಹೊಮ್ಮಿ ನೆಲಕಚ್ಚಿ ನಿಂತ ಕಾಲಗಳು ನೆಲ ಬಿಟ್ಟು ಹಾರಿ

ಬಾನ ತಾರೆಗಳ ಸ್ಪರ್ಶಿಸಿದಂತಹ ಪುಳಕ .


Thursday, March 26, 2009

ಬದುಕೆಷ್ಟು ಸುಂದರ


ಆಹಾ !ಬದುಕೆಷ್ಟು ಸುಂದರ

ಮುಂಜಾನೆಯ ಇಬ್ಬನಿಯು ಚಿಗುರೆಲೆಗಳ

ಮುತ್ತಿಕ್ಕಿ ಭಾವೊನ್ಮಾದಿತವಾದ ರಸ ಚಿತ್ರಣವ

ಕಣ್ ತುಂಬಿಸಿ , ಆಕಳಿಸಿ ಮೈ ಮುರಿಯುವಾಗ


ಚಂದ್ರಮ ಮರೆಯಾಗಿ ನೇಸರನು

ಸಪ್ತಾಶ್ವಗಳ ಏರಿ ಪತ್ರಗಳು ಅದಲು ಬದಲಾಗಿ

ಹಕ್ಕಿಗಳ ರೆಕ್ಕೆ ಹರಡಿ ,ಕೊರಳುಗಳು ಉಲಿದು

ಲಜ್ಜೆಯಲಿ ಹೂ ಗಳು ಮೈನೆರೆಯುವಾಗ


ದಿವಾಕರನ ಕೋಟಿ ಕಿರಣಗಳು ಇಳೆಯಪ್ಪಿ

ಕಲ್ಲೂ ಹೂವಾಗಿ ಅರಳಿ ,ಪ್ರತಿ ಪ್ರಾಣದಲ್ಲೂ

ಜೀವ ಚೈತನ್ಯ ಉಜ್ವಲಿಸಿ ,ವಿಶ್ವೊತ್ಸಾಹದ

ಬೆಳಕು ಆತ್ಮಗಳಲಿ ಕುಣಿದಾಡುವಾಗ


ನೆಲ , ಜಲ ,ಭಾನು ರಂಗೇರಿ

ಪ್ರಕೃತಿಯಲಿ ನಾನು ಒಂದೆಂದು ಸಂಭ್ರಮಿಸಿ

ಅಂಬರವ ದಿಟ್ಟಿಸಿ ನಿನ್ನೊಳಗೆ ನಾನೂ ?

ನನ್ನೊಳಗೆ ನೀನೋ ? ಎಂಬಂತೆ ಪುಳಕಿತವಾದಾಗ !

ಬದುಕೆಷ್ಟು ಸುಂದರ

Wednesday, March 25, 2009

ಬಲಿದಾನ


ಅಗೋ ನೋಡಿ ಕದನ ಕಣದಿ ವೈರಿ ಪಡೆಯ
ಕುತಂತ್ರ ಸಿಡಿವ ಬಾಂಬುಗಳ ಮಧ್ಯದಿ
ಬಲಿದಾನಗೈದ ಅಮರ ಯೋಧರ
ರಕ್ತ ಸಿಕ್ತ ಕಾಯಗಳು ಸಾಗುತಿವೆ

ಭೀಕರ ಯುದ್ಧದಿ ಗುಂಡೇಟು ಗಳಿಗೆ ನಲುಗಿ
ಜೀವನ್ಮರಣ ದಲಿ ಸಿಲುಕಿ ಯಮನೊಂದಿಗೆ
ಹೋರಾಟ ಮಾಡುತಲಿ ,ಯೋಧರ
ಆತ್ಮಗಳು ಅವ್ಯಕ್ತ ಯಾತನೆಯ ಅನುಭವಿಸುತಲಿವೆ .

ಕೊರೆವ ಚಳಿಯಲಿ ಬೆಂಡಾಗಿ ,ಸುಡು ಬಿಸಿಲಿನಲ್ಲಿ
ಕೆಂಪಾಗಿ ,ಪ್ರಾನತರ್ಪನಗೈಯ್ದ ನಿಷ್ಪಾಪಿ ವೀರ
ಯೋಧರ ಆತ್ಮಗಳು ವೀರ
ಸ್ವರ್ಗದ ಹಾದಿ ಹಿಡಿಯುತಿವೆ .

ಮಾತೃ ಭೂಮಿಯ ಉಳಿಸಲು
ಸಮರದಿವೀರಕಂಕನವ ತೊಟ್ಟು ಬುಗಿಲೆದ್ದ ಬೆಂಕಿ ,
ಧೂಮ ಆಸ್ಪೋಟಗಳಲಿ ಅಗಲಿದ ವೀರನ
ನೆನೆದು ನಮ್ಮ ಕಂಗಳು ಅಶ್ರುಧಾರೆಯ ಸುರಿಸುತಲಿವೆ .

ಮಾಂತ್ರಿಕ ಮಳೆ


ಅದೆಂತಹ ಕಲೆಗಾರಿಕೆ ನಿನ್ನದು ಮಳೆಯೇ !
ಚಿಗುರುಗಳ ಬರೆದು ,ಹೂ ಮೊಗ್ಗುಗಳ ಬಿಡಿಸಿ
ಹಸಿರು ಚಿತತಾರಗಳ ಮೊಒಡಿಸಿ ,ಹಳ್ಳ ಕೊಳ್ಳಗಳಿಗೆ
ಕೆಮ್ಬನ್ನವ ತುಮ್ಬಿಸುವಷ್ಟು !

ಅದೆಂತಹ ರಸಿಕತೆ ನಿನ್ನದು ಮಳೆಯೇ
ಅರಳಿದ ಮುಸ್ಸಂಜೆಯಲಿ ಭಾವ ಬಿಂದುಗಳ
ಭೋರ್ಗರಿಸಿ ,ಇಳೆಯ ನಾಚಿಕೆಯಲಿ ಕೆಂಪಾಗಿಸಿ,
ಮುದ್ದೆಯಾಗಿಸಿ ಮುತ್ತಿನ ಅಲಂಕಾರಗೈಯುವಷ್ಟು !

ಅದೆಂತಹ ಶಕ್ತಿಯು ನಿನ್ನದು ಮಳೆಯೇ
ಭಾವ ಜೀವಂತಿಕೆಯ ಬರುವಿಕೆಗೆ ಕಾದ ಕನ್ಗಳನ್ನು
ತಂಪಾಗಿಸುವಷ್ಟುಈ ಕವಿ ಹೃದಯಕ್ಕೆ
ಜೀವಧಾರೆಯಾಗಿ ಹಸಿರಾಗಿಸುವಷ್ಟು !

ಅದೆಂತಹ ಲೀಲೆಯು ನಿನ್ನದು ಮಳೆಯೇ
ಎಲ್ಲೋ ಹುಟ್ಟುವ ಮೇಘಗಳ ಎಲ್ಲೋ ಕರೆತಂದು
ಮಳೆಗರೆಸಿ ಇಳೆಯಪ್ಪುವ ಪ್ರತಿ ಬಿಂದುಗಳಲ್ಲೂ
ನಾದ ,ಗಂಧಗಳ ಹೊಮ್ಮಿಸುವಷ್ಟು !

ಅದೆಂತಹ ಮಾಂತ್ರಿಕತೆ ನಿನ್ನದು ಮಳೆಯೇ
ಮಣ್ಣ ಕಣ ಕಣಕೂ ಜೀವ ತುಂಬಿ ,ಫಳ ಫಳ ಸುವ
ತಾರಾಗಣ ,ಬೆಳ್ಳನೆಯ ಚಂದಮನನ್ನೂ ಮರೆಯಾಗಿಸಿ
ಮಿಂಚಿನ ಸಂಚಾರದಲ್ಲೇ ಕತ್ತಲ ಕೊನೆಯಾಗಿಸುವಷ್ಟು