Tuesday, March 31, 2009

ಅಂದೊಂದು ದಿನ



ಅಂದೊಂದು ದಿನ ಪರಿಚಿತ ಲೋಕದ ಕೊಂಡಿಯೊಂದು

ಆಕಸ್ಮಿಕದಿ ಸೇರಿತ್ತು ,ಈ ತೀರದಲ್ಲಿನ ನಿನ್ನ ಮುಖ ನನಗೆ

ನನ್ನ ಮುಖ ನಿನಗೆ ಮಸುಕು ಮಸುಕಾಗಿ ಕಂಡು

ಆಶ್ಚರ್ಯದ ಮುಗ್ಧನಗೆ ಹೊರಬಿದ್ದಿತ್ತು .

ಕಣ್ಣಂಚಿನಲ್ಲಿ ಸುಳಿ ಮಿಂಚೊಂದು ಫಳ ಫಳಿಸಿ ಭರವಸೆಯೊಂದು

ಚಿಗುರೊಡೆದಿತ್ತು ,ಮೌನರಾಗದ ಆಹ್ಲಾದತೆ ಎದೆ ತುಂಬಿತ್ತು

ಕನಸಿನ ಲೋಕದ ಕಡೆಗೆ ಹೆಜ್ಜೆ ಸಾಗಿತ್ತು ತಂಗಾಳಿಯ

ಮೋಹದಲೆಯ ಸ್ವರವು ಲಯಬದ್ಧವಾಗಿ ಹೊರಹೊಮ್ಮಿತ್ತು

ತೀರಗಲಾಚೆಯೊಂದು ಪಿಸುಮಾತಿತ್ತು ,ಸಂಭ್ರಮದ

ಇದಿರು ನೋಟವಿತ್ತು ,ಮಲ್ಲಿಗೆಯ ಪರಿಮಳ ದೂರದೂರಿನಿಂದ

ತೇಲಿ ಬಂದಿತ್ತು ,ಹೃದಯದಲ್ಲಿ ಕಿತ್ತ ಭಾವಪೂರ್ಣ

ಪದಗಳ ನಾಲಿಗೆಯ ಮೇಲೆ ಆಡಿಸುವಾಸೆಯಾಗುತ್ತಿತ್ತು .

ಆ ತೀರಕೆ ನಾನೇ ಬಂದು ಸೇರಲು ಹೆಜ್ಜೆ ಸನ್ನದ್ಧವಾಗಿತ್ತು

ಮನವು ದೋಣಿಗಾಗಿ ಹಾತೊರೆಯುತ್ತಿತ್ತು ,ಮರುಘಳಿಗೆಯೇ

ನೀ ದಾರಿ ಬದಲಿಸಿದೆ ನೀ ಏಕೆ ಹೊರತೆಯಂದೂ ತಿಳಿಯಲಿಲ್ಲ

ಅದ ಕೇಳುವ ತಾಕತ್ತು ನನಗಿರಲಿಲ್ಲ

ಕೂಗಲು ಬಾಯೇ ಬರಲಿಲ್ಲ ,ಸ್ವಾಭಿಮಾನ

ನಾಲಿಗೆಯ ಕಟ್ಟಿ ಹಾಕಿತ್ತು ,ಹಿಂತಿರುಗಿ ನೋಡಿ ನಸು ನಗೆ

ಬೀರುವ ಸೌಜನ್ಯವೂ ನಿನಗಿರಲಿಲ್ಲ ಒಮ್ಮೆಗೇ ಏಕಾಂತ ಕವಿಯಿತು

ಕುರುಡು ಕನಸಿನ ಲೋಕದಿ ಹೆಜ್ಜೆ ಗುರುತಾಗಿ ಉಳಿಯಿತು .

ನನ್ನದೇ ತಪ್ಪಿರಬೇಕು ಸುಮ್ಮನೆ ನಿನ್ನ ನಿರ್ಭಾವುಕ

ಕಂಗಳಲಿ ನನ್ನ ಮೊಗವ ಹುಡುಕಲು ಪ್ರಯತ್ನಿಸಿದ್ದೆ

ಹಿಂದೆಲ್ಲ ನನ್ನ ಕಂಗಳಲ್ಲಿ ಅವರ ಮೊಗ ಕಾಣಲು

ಯತ್ನಿಸಿದ್ದಾಗ ನಾನು ನಿರ್ಭಾವುಕದಿ ನಿಂತಿದ್ದೆ .

1 comment:

  1. ಹಾಯ್ ದಿವ್ಯಾ..
    ನಿಮ್ಮ ಬ್ಲ್ಯಾಗಿಗೆ ಇವತ್ತೆ ತಾನೆ ಬೇಟಿ ನಿಡಿದೆ
    ನಿಮ್ಮ ಎಲ್ಲಾ ಬರಹಗಳು ತುಂಟ ಹುಡುಗಿಯಂತೆ ಮೋಹಕವಾಗಿವೆ
    ಮತ್ತೆ ಬಿಡುವಿದ್ದಾಗ ಬೇಟಿ ಮಾಡುತ್ತೆನೆ
    ಬಿಡುವಿದ್ದರೆ ಸಾವಿರ ಕನಸಿಗೆ ಬನ್ನಿ
    ಬರುತ್ತಿರಲ್ಲಾ..?

    ReplyDelete