Saturday, March 7, 2009

ಅಲೆಮಾರಿ ಕಂದಮ್ಮಗಳು


ಖಾಲಿ ಬಾಟಲಿ ,ಕಸರಾಶಿಗಳ ಹಿಡಿದು,
ಕೇರಿಕೇರಿಗಳ ತೊಟ್ಟಿಗಳೋಲು ಮುತ್ತುವ ನಾಯಿ ,
ನೊಣಗಳ ಓಡಿಸಿ,ಪೈಪೋಟಿಯೊಳು ಕೈ ಆಡಿಸಿ
ಹಳಸು ಅನ್ನವ ತೃಪ್ತಿಯೊಳು ಬಾಯ್ಗಿಡುವ
ಶೂನ್ಯ ಭವಿತವ್ಯದ ಬೀದಿ ಮಕ್ಕಳು ನಾವು .

ಎಣ್ಣೆ ಸೋಂಕದ ಒರಟು ,ಕೆಂಚು
ಕೂದಲೊಳುಹೇನು ಹುಳಗಳ ಹೊಸಕಿ ,
ಸಿಂಬಳ ಸುರಿವ ಮೂಗ ತೀಡುತಲಿ,ಬತ್ತಿದ
ಮೈಗೆ ಚಿಂದಿ ಬಟ್ಟೆಯ ತೊಟ್ಟು,ದಾರಿ ಹೋಕರ
ಕಾಲಿಗೆರೆದು ,ಭಿಕ್ಷೆ ಬೇಡುವ ಅಲೆಮಾರಿ ಕಂದಮ್ಮಗಳು ನಾವು .

ಬಡತನದ ಬೇಗುದಿಯಲಿ ಬೆಂದು ,ಪರರ
ಜೇಬಿಗೆ ಕತ್ತರಿ ಹಾಕಿ ಕರವಸ್ತ್ರದಿ ಮಾದಕ
ದ್ರವ್ಯಗಳ ಚುಮುಕಿಸಿ ವಾಸನೆಯ ನೆತ್ತಿಗೆರಿಸಿ
ಶ್ರೀಮಂತ ಮಕ್ಕಳ ಹರುಕು ಮುರುಕು ಸಿಗರೇಟುಗಳ
ಹೊಗೆಯ ಟೇ೦ಕಾರದಿ ಒಳಗಿಳಿಸಿ ,ಸುಪ್ತಲೋಕದಿ
ಕಟ್ಟುಪಾಡುಗಳ ಕಡೆಗಣಿಸಿ ಅವ್ಯಕ್ತಾನಂದದೆಡೆಗೆ
ಮುಖಮಾಡಿ ನಿಂತಿರುವ ಜೀವವಿರುವ ನಿರ್ಜೀವಿಗಳು ನಾವು .

No comments:

Post a Comment