
ಆಹಾ !ಬದುಕೆಷ್ಟು ಸುಂದರ
ಮುಂಜಾನೆಯ ಇಬ್ಬನಿಯು ಚಿಗುರೆಲೆಗಳ
ಮುತ್ತಿಕ್ಕಿ ಭಾವೊನ್ಮಾದಿತವಾದ ರಸ ಚಿತ್ರಣವ
ಕಣ್ ತುಂಬಿಸಿ , ಆಕಳಿಸಿ ಮೈ ಮುರಿಯುವಾಗ
ಚಂದ್ರಮ ಮರೆಯಾಗಿ ನೇಸರನು
ಸಪ್ತಾಶ್ವಗಳ ಏರಿ ಪತ್ರಗಳು ಅದಲು ಬದಲಾಗಿ
ಹಕ್ಕಿಗಳ ರೆಕ್ಕೆ ಹರಡಿ ,ಕೊರಳುಗಳು ಉಲಿದು
ಲಜ್ಜೆಯಲಿ ಹೂ ಗಳು ಮೈನೆರೆಯುವಾಗ
ದಿವಾಕರನ ಕೋಟಿ ಕಿರಣಗಳು ಇಳೆಯಪ್ಪಿ
ಕಲ್ಲೂ ಹೂವಾಗಿ ಅರಳಿ ,ಪ್ರತಿ ಪ್ರಾಣದಲ್ಲೂ
ಜೀವ ಚೈತನ್ಯ ಉಜ್ವಲಿಸಿ ,ವಿಶ್ವೊತ್ಸಾಹದ
ಬೆಳಕು ಆತ್ಮಗಳಲಿ ಕುಣಿದಾಡುವಾಗ
ನೆಲ , ಜಲ ,ಭಾನು ರಂಗೇರಿ
ಪ್ರಕೃತಿಯಲಿ ನಾನು ಒಂದೆಂದು ಸಂಭ್ರಮಿಸಿ
ಅಂಬರವ ದಿಟ್ಟಿಸಿ ನಿನ್ನೊಳಗೆ ನಾನೂ ?
ನನ್ನೊಳಗೆ ನೀನೋ ? ಎಂಬಂತೆ ಪುಳಕಿತವಾದಾಗ !
ಬದುಕೆಷ್ಟು ಸುಂದರ
No comments:
Post a Comment