Saturday, March 7, 2009

ಕ್ರಿಮಿಗಳು ಸಾರ್ ಕ್ರಿಮಿಗಳು




ಮೊನ್ನೆಯಿಂದ ಎಲ್ಲಿ ನೋಡಿದರು ಕ್ರಿಮಿಗಳು ಸಾರ್ ಕ್ರಿಮಿಗಳು .ಪಿತಪಿತನೆ ಜೊಂಪೆ ಜೊಂಪೆಯಾಗಿ ಹೊರಳಾಡುವ ಕ್ರಿಮಿಗಳು."ಬನ್ನಿ ರೋಗಗಳನ್ನು ಹರಡೋಣ "ಎಂದು ಕ್ರಿಮಿಗಳ ದಂಡು ನನ್ನ ಮುಂದೆ ಬಂದಂತಾಗುತ್ತಿದೆ .ಆ ಕ್ರಿಮಿಗಳನ್ನು ನೋಡಿದರೆ ...................ಒಂದು ನಿಮಿಷ ವಾಕರಿಕೆ ಬರುತ್ತಿದೆ .........ಹೋಗಿ ಬರ್ತೇನೆ ಇಲ್ಲೇ ಕುಳಿತಿರಿ ನನ್ನ ಸಂಕಷ್ಟವನ್ನು ನಿಮ್ಮ ಬಳಿ ಹೇಳಲೇ ಬೇಕು .

ಹ್ಹ ! ಆಗ ನಾನು ಏನು ಹೇಳುತ್ತಿದ್ದೆ ?..................ಓಹೋ ಕರೆಕ್ಟ್ ಕ್ರಿಮಿಗಳ ಬಗ್ಗೆ ಹೇಳ್ತಿದ್ದೆ ."ಕಣ್ಣಲ್ಲೂ ನೀನೆ ಕಾಣೆ ,ಮನದಲ್ಲೂ ನೀನೆ ಕಾಣೆ ,ಎಲ್ಲೆಲ್ಲು ನೀನೆ ಕಾಣುವೆ "ಎಂಬಂತೆ ನನಗಂತೂ ಈ ಕ್ರಿಮಿಗಳ ಸಾಮ್ರಾಜ್ಯವೇ ಕಾಣುತ್ತಿದೆ .ಇದೇನು ವಿಚಿತ್ರ ಎಂದು ಕೊಂಡಿರಾ? ಬಹುಷಃ ಯಾರಾದರು ಈಕೆಗೆ ನಿನ್ನ ಬಾಯಿಗೆ ಹುಳ ಬೀಳ ಎಂದು ಶಪಿಸುವ ಹಾಗೆ ನಿನ್ನ ಕಣ್ಣಿಗೆ ಬರೇ ಹುಳವೇ ಕಾಣ ಎಂದು ಶಾಪ ಹಾಕಿರಬೇಕು ಎಂದುಕೊಂಡಿರಾ? ಅಯ್ಯೋ ದಯವಿಟ್ಟು ಹಾಗೆ ಅಪಾರ್ಥ ಮಾಡಿಕೊಳ್ಳಬೇಡಿ . ಇತ್ತೀಚಿಗೆ ನಾನು ಕ್ರಿಮಿಗಳ ಹುಟ್ಟು, ಬೆಳವಣಿಗೆ ಬಗ್ಗೆ ಓದಿ ಜ್ಞಾನಾರ್ಜನೆ ಮಾಡಿಕೊಂಡೆ ಅಂದಿನಿಂದ ಅಣು ರೇಣು ತೃಣ ಕಾಷ್ಟಗಳಲ್ಲೂ ಕ್ರಿಮಿಗಳೇ ಸಾರ್ ಕ್ರಿಮಿಗಳೇ




ಜಾಹೀರಾತೊಂದು ಟಾಯ್ಲೆಟ್ನಲ್ಲಿ ಕ್ರಿಮಿಯೊಂದು ಹೇಗೆ ಕೊಳಕು ಕೊಳಕಾಗಿ ವಾಕರಿಕೆ ಮಾಡಿಕೊಳ್ಳುತ್ತದೆ ಎಂಬುದನ್ನೂ ತೋರಿಸಿದಾಗ ನನಗೆ ೨-೩ ಬಾರಿ ವಾಕರಿಕೆಯಾಗಿತ್ತು .ಸುಸ್ತಾಯಿತು ಈಗ ಖಾಲಿ ಆಗಿರುವ ಹೊಟ್ಟೆಗೆ ಏನಾದರು ಆಹಾರ ಹಾಕೋಣ ಎಂದು ತಟ್ಟೆಗೆ ತಿಂಡಿ ಬಡಿಸುತ್ತಿದ್ದಂತೆ ತಟ್ಟೆ ತೊಳೆದ ನಂತರವೂ ಎಷ್ಟೊಂದು ಕ್ರಿಮಿಗಳಿವೆ ಎಂದು ತೋರಿಸುವ ಮತ್ತೊಂದು ಜಾಹೀರಾತು ಪ್ರತ್ಯಕ್ಷವಾದುದ್ದೆ ತಡ ಅಸಹ್ಯವಾಗಿ ತಟ್ಟೆಗೆ ಬಂದ ತಿಂಡಿ ನನ್ನ ಕೈ ಬಾಯಿಯನ್ನು ಹತ್ತಲೇ ಇಲ್ಲ ಸಾರ್ .




ಸರಿ ಈ ಜಾಹೀರಾತಿನವರಿಗೆಲ್ಲ ಕಾಣುವ ಕ್ರಿಮಿಗಳು ನನಗೇಕೆ ಕಾಣುತ್ತಿಲ್ಲ ವೆಂದು ಚಿಂತಿಸಿ ,ಯೋಚಿಸಿ ಇವು ಬರಿಗಣ್ಣಿಗೆ ಕಾಣಿಸಲು ಸಾಧ್ಯವಿಲ್ಲವೆಂದು ಅರಿತು ಮೈಕ್ರೋಸ್ಕೋಪಿಕ್ ಕನ್ನಡಕ ಧರಿಸುವುದು ಸೂಕ್ತವೆನ್ನಿಸಿ ದುಬಾರಿ ಹಣ ತೆತ್ತು ಕೊಂಡುಕೊಂಡೆ .ಏಕೆಂದರೆ ಹೆಲ್ತ್ ಇಸ್ ವೆಲ್ತ್ ನೋಡಿ !ಅದನ್ನು ಕೊಂಡು ಕೊಂಡಿದ್ದೆ ಆಯಿತು ಹಾಲಿನಲ್ಲೂ ಕ್ರಿಮಿಗಳೇ ,ಮೊಸರಿನಲ್ಲೂ ಕ್ರಿಮಿಗಳೇ ,ಬ್ರೆದ್ದಿನಲ್ಲೂ ಕ್ರಿಮಿಗಳೇ ಎಲ್ಲೆಲ್ಲೂ ಕ್ರಿಮಿಗಳದ್ದೆ ರಾಜ್ಯಭಾರ ವೆಂದು ಜ್ಞಾನೋದಯವಾಯಿತು .ಇವುಗಳನ್ನು ಅಂದಿನಿಂದ ಉಪಯೋಗಿಸುವುದನ್ನೇ ಬಿಟ್ಟು ಬಿಟ್ಟಿದ್ದೇನೆ .ಹಾಲು ,ಮೊಸರು , ಬ್ರೆಡ್ಡು ಇವುಗಳೆಲ್ಲ ಈಸ್ತು ,ಬೂಸ್ತಿನಂತಹ ಕ್ರಿಮಿಗಳಿಂದಲೇ ಆಗಿರುವುದು .ಅಯ್ಯೋ!ಕಾಣದಿರುವುದಕ್ಕೆ ದೋಷವಿಲ್ಲವೆಂದು ಎಲ್ಲರೂ ಲೆಕ್ಟುರ್ ಕೊಟ್ಟಿದ್ದೆ ಕೊಟ್ಟಿದ್ದು ಏನಾದರು ಹೇಳಿ ತಿಳಿದೂ ತಿಳಿದೂ ಕ್ರಿಮಿಗಳನ್ನು ತಿನ್ನಲಾಗುವುದೇ ?




ಇನ್ನು ಈ ಮೈಕ್ರೋಸ್ಕೋಪಿಕ್ ಕನ್ನಡಕದಲ್ಲಿ ನೋಡಿದರೆ ಟಿವಿ ,ಕಂಪ್ಯೂಟರ್ ಎಲ್ಲದರ ಸ್ಕ್ರೀನ್ ಗಳ ಮೇಲೂ ಕ್ರಿಮಿಗಳೇ ಸಾರ್ ,ಎಷ್ಟೇ ಕ್ಲೀನ್ ಮಾಡಿದರು ಮರು ಕ್ಷಣವೇ ಕ್ರಿಮಿಗಳ ದಾಳಿ .ನನಗಂತೂ ಅದರಲ್ಲಿ ಬರುವ ಎಲ್ಲರೂ ಕ್ರಿಮಿಗಳಂತೆಯೇ ಕಾಣುತ್ತಿದ್ದಾರೆ. ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಜನರಿಗಿಂತ ಕ್ರಿಮಿಗಳೇ ಹೆಚ್ಚಾಗಿ ಕಾಣುತ್ತಿವೆ . ನನಗೂ ಫಿನಾಯಿಲ್ನಲ್ಲಿ ಮನೆಯ ಎಲ್ಲ ವಸ್ತುಗಳನ್ನು ಘಳಿಗೆ ಗೆ ಒಂದು ಬಾರಿ ತೊಳೆದು ತೊಳೆದು ಅಂಗೈ ಚರ್ಮವೆಲ್ಲ ಎಡೆದು ಬರುತ್ತಿದೆ .




ಇನ್ನು ಹಣ್ಣು ,ತರಕಾರಿ ಸೊಪ್ಪುಗಳ ವಿಷಯ ಕೇಳಲೇ ಬೇಡಿ ಇವುಗಳಲ್ಲಿರುವ ಕ್ರಿಮಿಗಳನ್ನು ಓಡಿಸಲು ಯಾವ ವಿಮ್, ಎಕ್ಸೋ ,ಫಿನಾಯಿಲ್ಗಳನ್ನು ಹಾಕಲು ಸಾಧ್ಯ ನೀವೇ ಹೇಳಿ .ಇನ್ನು ಇವುಗಳೆಲ್ಲ ಕ್ರಿಮಿ ಯಾನ್ತರ್ಯಾಮಿ ಗಳಾಗಿರುವುದರಿಂದ ಅವುಗಳನ್ನು ಉಪಯೋಗಿಸುವುದನ್ನೂ ಬಿಟ್ಟೆ .




ಈ ಚಾಕ್ಲೆಟ್ ,ಬಿಸ್ಕೆಟ್ ಗಳ ವಿಷಯವನ್ನಂತೂ ಕೇಳಲೇ ಬೇಡಿ ಪ್ರತಿನಿತ್ಯ ವೃತ್ತ ಪತ್ರಿಕೆಗಳಲ್ಲಿ ಅದೇ ರಾಗ ಚಾಕ್ಲೆಟ್ , ಬಿಸ್ಕೆಟ್ ಗಳಲ್ಲಿ ಹುಳುಗಳು ಸಿಗುತ್ತಿವೆ ಎಂದು .ಕಣ್ಣಿಗೆ ಕಾಣುವಂತೆಯೇ ಹುಳುಗಳು ಸಿಗುತ್ತಿವೆ ಎಂದಾದರೆ ಇನ್ನು ಕಣ್ಣಿಗೆ ಕಾಣದ ಕ್ರಿಮಿಗಳೆಷ್ಟೋ ಅಲ್ವೇ !ಇದನ್ನು ನನ್ನ ಸ್ನೇಹಿತರಿಗೆ ಹೇಳಿದರೆ "ಇದಕ್ಕೆಲ್ಲ ವರಿ ಮಾಡಕ್ಕಾಗಲ್ಲಮ್ಮ,ತಿಂದು ಎಂಜಾಯ್ ಮಾಡ್ಬೇಕು ಒಂದು ಕೆಲಸ ಮಾಡು ಚಾಕ್ಲೆಟ್ ತಿಂದು ತಕ್ಷಣ ತಂಪು ಪಾನೀಯ ಕುಡಿದು ಬಿಡು ಅದರಲ್ಲಿ ಕ್ರಿಮಿನಾಶಕ ಇದೆ ನಮ್ಮ ದೇಶದ ರೈತರು ತಮ್ಮ ಹೊಲಗಳಿಗೆ ಈ ತಂಪು ಪಾನಿಯಗಳನ್ನೇ ಕ್ರಿಮಿನಾಶಕ ಗಳನ್ನಾಗಿ ಬಳಸುತ್ತಾರೆ ಹೊಲಾನೆ ಕ್ಲೀನ್ ಮಾಡೋ ಅದು ನಿನ್ನ ಹೊಟ್ಟೆ ಕ್ಲೀನ್ ಮಾದಲ್ವೆ "ಅಂತ ರೆಗಿಸ್ತಾರೆ ಸಾರ್ .




ಆಯಾಸವಾಗಿ ಹಾಸಿಗೆಯ ಮೇಲೆ ಮಲಗಲು ಹೋದರೆ ಅವುಗಳ ಮೇಲೂ ಕ್ರಿಮಿಗಳು ನಿದ್ರಿಸುತ್ತಿವೆ .ಅದನ್ನು ಕ್ಲೀನಾಗಿ ಒಗೆದು ,ಹಾಸಿಕೊಂಡರೂ ಮತ್ತೆ ಕ್ರಿಮಿಗಳು . ನಿದ್ದೆಗಿಂತ ಹಾಸಿಗೆ ಸ್ವಚ್ಚ ಮಾಡೋದೇ ದೊಡ್ಡ ಸಮಸ್ಯೆ ಯಾಗಿದೆ .ಈ ಕ್ರಿಮಿಗಳು ಸ್ವಚ್ಚ ಮಾದುತ್ತಿದ್ದಷ್ಟು ವ್ರುದ್ಧಿಯಾಗುತ್ತಲೇ ಇವೆ .




ಛೆ ನನಗೂ ಯಾಕೋ ಬೇಜಾರಾಗಿ ಹೋಗಿದೆ ಕಣ್ರೀ !ನಾನೂ ಕ್ರಿಮಿಗಳ ಬಗ್ಗೆ ಬಾರಿ ಅಧ್ಯನ ನಡೆಸಿ ಬಿಟ್ಟಿದ್ದೇನೆ .ಬಹುಷಃ ಕ್ರಿಮಿನಾಳಜಿಯಲ್ಲಿ ಪಿ ಹೆಚ್ ದಿ ಪದೆಯಬಹುದಾದಷ್ಟು !ಈ ಕ್ರಿಮಿಗಳ ಬಗ್ಗೆ ಯೋಚಿಸಿ ,ಯೋಚಿಸಿ ನಿದ್ದೆಯಿಲ್ಲ ,ತಿಂಡಿಯಿಲ್ಲ,ತೀರ್ಥವಿಲ್ಲ ಅಬ್ಬ !ಬೇಜಾರಾಗಿ ಹೋಗಿದೆ !ಸುಸ್ತಾಗಿ ಹೋಗಿದೆ !ಒಂದು ನಿಮಿಷ ಕೈ ತೊಳೆದು ಬರ್ತೀನಿ ಈ ಕಂಪ್ಯೂಟರ್ ಕೀಲಿ ಮಣೆ ಮುತ್ತಿ ನನ್ನ ಕೈಗೆ ವೈರೆಸ್ಸೋ ,ಬ್ಯಾಕ್ತಿರಿಯಾನೋ ಮುತ್ತಿರಬಹುದು ಯಾರಿಗೆ ಗೊತ್ತು ಅಲ್ವೇ !

No comments:

Post a Comment